ನಗ್ನೀಕರಣ -
ನೆಲಸವಕಳಿಯಿಂದ ಶಿಲೆಗಳು ಎದ್ದು ಕಾಣುವಿಕೆ, ಹಸಿರಿನ ನಿರ್ಮೂಲನದಿಂದ ನೆಲ ಬೋಳು ಬಂಜರಾಗಿ ಹಾಳುಗರೆಯುವಿಕೆ (ಡಿನ್ಯೂಡೇಶನ್). ಗಾಳಿ, ಹೊಳೆ, ಮಳೆ, ಹಿಮನದಿಗಳೆಂಬ ನೈಸರ್ಗಿಕ ಬಲಗಳು ನಿರಂತರ ಕ್ರಿಯಾಶೀಲವಾಗಿದ್ದು ಮೂರು ಬಗೆಯ ಕೆಲಸಗಳನ್ನು ಮಾಡುತ್ತಿರುವುವು: ಸವೆತ, ಸಾಗಣೆ ಮತ್ತು ನಿಕ್ಷೇಪಣೆ. ಒಂದು ಪ್ರದೇಶದಲ್ಲಿ ನೆಲವನ್ನು ಸವೆದು, ಕೊರೆದು ಇಲ್ಲವೆ ಕರಗಿಸಿ ವಸ್ತುವನ್ನು ಇನ್ನೊಂದು ಪ್ರದೇಶಕ್ಕೆ ಸಾಗಿಸಿ ಅಲ್ಲಿ ಅದನ್ನು ಒಟ್ಟಯಿಸುವ ಕೆಲಸವನ್ನು ಈ ನಾಲ್ಕೂ ನೈಸರ್ಗಿಕ ಬಲಗಳು ಮಾಡುತ್ತಿರುವುವು. ಹೀಗಾಗಿ ಭೂಮಿಯ ಮುಖ ಸದಾ ಬದಲಾಗುತ್ತಲೇ ಇರುವುದು.

	ಭೂಮಿಯ ಮೇಲ್ಮೈ ವಿವಿಧ ಶಿಲೆಗಳಿಂದ ನಿರ್ಮಿತವಾಗಿವೆ. ಇದಕ್ಕೆ ಶಿಲಾವಲಯ ಎಂದು ಹೆಸರು. ಭೂಮಿಯ ಅಧಿಕಭಾಗವನ್ನು ನೀರು ಸುತ್ತುಗಟ್ಟಿದೆ. ಇದಕ್ಕೆ ಜಲಗೋಳ ಎಂದು ಹೆಸರು. ಇವೆರಡನ್ನೂ ವಾಯುಗೋಳ ಸರ್ವತ್ರ ಆವರಿಸಿದೆ. ಈ ಮೂರೂ ವಲಯಗಳ ಪರಸ್ಪರ ಸಂಪರ್ಕದಿಂದ ಭೂಮಿಯ ಮುಖ, ಅದರ ಮೇಲ್ಮೈ ಹೆಪ್ಪುಗಟ್ಟಿದ ಕಾಲದಿಂದ ಇಂದಿನತನಕ ಅಂದರೆ ಸುಮಾರು 450 ಕೋಟಿ ವರ್ಷಗಳ ಅವಧಿಯಲ್ಲಿ, ಬದಲಾವಣೆಗೊಳ್ಳುತ್ತ ಬಂದಿದೆ. ಹಿಂದಿನ ನಾನಾ ಯುಗಗಳಲ್ಲಿ ಇದ್ದ ಭೂಗೋಳದ ಮುಖವೇ ಬೇರೆ. ಇಂದಿನ ಭೂಮಿಯ ಮುಖವೇ ಬೇರೆ.

	ಸೂರ್ಯನ ಕಾವು, ಗಾಳಿ ಮಳೆ, ಹಿಮ, ಹೊಳೆ ಹಿಮನದಿ, ಕಡಲು ಮೊದಲಾದ ವಿವಿಧ ಭೂವೈಜ್ಞಾನಿಕ ಬಲಗಳಿಂದ ಭೂಮಿಯ ಆಕಾರ ಸದಾ ಬದಲಾಗುತ್ತಿರುವುದು. ಮೇಲು ಪದರದ ಶಿಲೆಗಳು ಸವೆದು ಹೊಸ ಶಿಲಾವಸ್ತು ಉತ್ಪನ್ನವಾಗುತ್ತದೆ. ಶಿಲೆಗಳ ಸವೆತವೇ ಶಿಲಾಕ್ಷಯ ಅಥವಾ ನಗ್ನೀಕರಣ ಅಥವಾ ಶಿಥಿಲೀಕರಣ. ಇದರಿಂದ ಉತ್ಪನ್ನವಾದ ಶಿಲೆಯ ಚೂರುಗಳು ಪುಡಿಪುಡಿಯಾಗಿ ಮರಳು, ಮಣ್ಣು ಮುಂತಾದ ರೂಪಗಳನ್ನು ತಳೆಯುವುವು. ಈ ಶಿಲಾಕಣಗಳನ್ನು ಗಾಳಿ ತೂರಿಕೊಂಡು ಹೋಗಿ ಬೇರೆ ಸ್ಥಳಗಳಿಗೆ ಸಾಗಿಸುತ್ತದೆ. ಹೀಗೆ ಶಿಲಾಕಣಯುಕ್ತವಾಗಿ ಬೀಸುವ ಗಾಳಿ ಅದಕ್ಕೆ ಎದುರಾಗಿ ಸಿಕ್ಕುವ ಶಿಲಾರಾಶಿಗಳ ಮೇಲೆ ಅಪ್ಪಳಿಸಿ ಬಡಿದು ಅವನ್ನು ಸವೆಸುತ್ತದೆ. ಗಾಳಿಯಂತೆ ಮಳೆ ಮತ್ತು ಹೊಳೆ ನೀರು ಕೂಡ ಭೂಸಾರದ ಕಣಗಳನ್ನೂ ಶಿಲಾಕಣಗಳನ್ನೂ ಸಡಿಲಗೊಳಿಸುತ್ತದೆ. ಬಲುಗಟ್ಟಿಯಾದ ಶಿಲಾರಾಶಿಯಾದರೂ ಹವಾ ವ್ಯತ್ಯಾಸಗಳಿಂದ ಮತ್ತು ನೈಸರ್ಗಿಕ ಬಲಗಳ ಹೊಡೆತದಿಂದ ಕಾಲಕ್ರಮೇಣ ಒಡೆದು, ಚಿಕ್ಕ ಚಿಕ್ಕ ಬಂಡೆಗಳಾಗಿ ಬಿರಿದು ಕೆಳಕ್ಕೆ ಉರುಳಿ ಬೀಳುತ್ತವೆ, ಆಗ ಅದು ಪುಡಿಪುಡಿಯಾಗಿ ಈ ಕಲ್ಲು ಚೂರುಗಳು ಬೇಗ ಸವೆದು ಮರಳಾಗಿ ಮಣ್ಣಾಗುತ್ತವೆ. ಇಷ್ಟೇ ಅಲ್ಲ, ಭೂತಲದಲ್ಲಿ ಬೆಳೆಯುವ ಗಿಡಗಳ ಬೇರುಗಳು ನೀರನ್ನೂ ಖನಿಜಾಹಾರಗಳನ್ನೂ ಅರಸುತ್ತ ಕೆಳಕ್ಕೆ ಇಳಿಯುತ್ತ ಹೋಗಿ ಅಲ್ಲಿರುವ ಸಂದು ಬಿರುಕುಗಳಲ್ಲಿ ನುಗ್ಗಿ ಅವನ್ನು ಛೇದಿಸುತ್ತ ಮುಂದುವರಿಯುತ್ತವೆ. ಎರೆಹುಳು ಮೊದಲಾದ ಪ್ರಾಣಿಗಳು ಮೃದುವಾದ ಮಣ್ಣನ್ನು ತಿಂದು ಹಾಕುತ್ತವೆ. ಇವೆಲ್ಲವುಗಳ ಸಮಗ್ರ ಪರಿಣಾಮವಾಗಿ ಭೂತಲದ ಶಿಲಾಸ್ವಭಾವವೇ ಮಾರ್ಪಡುತ್ತದೆ.  

	ಶಿಲಾ ಚೂರುಗಳು ಸಣ್ಣದಾಗುತ್ತ ಪುಡಿಯಾಗಿ ಶಿಥಿಲೀಕರಣ ಮುಂದುವರಿದಂತೆ ಅವುಗಳ ರಾಸಾಯನಿಕ ವಿಯೋಜನೆ ಅತಿ ವೇಗದಿಂದ ಮತ್ತು ಸುಲಭವಾಗಿ ಸಾಗುತ್ತದೆ. ಈ ಪ್ರಕ್ರಿಯೆಗೆ ಭೌತ ಶಿಲಾಕ್ಷಯ ಅಥವಾ ಶಿಲಾವಿಘಟನೆ ಎಂದು ಹೆಸರು. ಶಿಲೆಗಳು ಅಕ್ಕಿಹಿಟ್ಟಿನಂತೆ ನುಣ್ಣನೆಯ ಪುಡಿಯಾಗುವುದುಂಟು. ಇದು ಶಿಲೆಗಳ ಚೂರ್ಣೀಕರಣ. ಜೀವಿಗಳಿಂದ ಆಗುವ ಶಿಲಾಕ್ಷಯವಾದರೇ ಅದು ಜೈವಿಕ ತೇಮಾನ. ಹೀಗೆ ಮೂರು ವಿಧವಾಗಿ ಭೂತಲದ ಶಿಲೆಗಳು ಸವೆಯುತ್ತವೆ. ಸವೆದ ಶಿಲೆಗಳು ದೂಳು ಗಾಳಿ ನೀರುಗಳಿಂದ ಬೇರೆ ಸ್ಥಳಗಳಿಗೆ ಹೋಗಿ ಸೇರುತ್ತವೆ. ಶಿಲಾಕ್ಷಯದ ಮುಂದಿನ ಅವಸ್ಥೆಯಾದ ಈ ಪ್ರಕ್ರಿಯೆಗೆ ಸ್ಥಾನಾಂತರೀಕರಣ ಅಥವಾ ಶಿಲಾಸಂಚಾರವೆಂದು ಹೆಸರು. ಹೀಗೆ, ಉತ್ಪತ್ತಿಯಾದ ಸ್ಥಳದಿಂದ ಶಿಲಾವಸ್ತು ಬೇರೆ ಸ್ಥಳಕ್ಕೆ ಗಾಳಿ ನೀರುಗಳಿಂದ ಒಯ್ಯಲ್ಪಟ್ಟು ನೆಲ, ನದೀಪಾತ್ರ ಮತ್ತು ದಡಗಳಲ್ಲಿಯೂ ಪ್ರವಾಹ ಮೈದಾನ ಮತ್ತು ನದೀಮುಖಗಳಲ್ಲಿಯೂ ನಿಕ್ಷೇಪಿಸಲ್ಪಡುತ್ತದೆ. ಇಲ್ಲವೇ ನೆಲದ ಮೇಲಿರುವ ವಿಶಾಲವಾದ ಸರೋವರಗಳಲ್ಲಿ ಅಥವಾ ಕಡಲತೀರದಲ್ಲಿ ನಿಕ್ಷೇಪಿಸಲ್ಪಡುತ್ತದೆ. ಈ ರೀತಿಯಲ್ಲಿ ಹೊಸ ಶಿಲೆ ನಿರ್ಮಾಣಗೊಳ್ಳುವುದು. ಶಿಲಾಕ್ಷಯ, ಶಿಲಾಸಂಚಾರ ಮತ್ತು ನವಶಿಲಾನಿರ್ಮಾಣ ಎಂಬ ಈ ಮೂರು ಹಸ್ತಗಳಿರುವ ಶಿಲಾ ಚಕ್ರಕಾಲಗತಿಯಲ್ಲಿ ಎಡೆಬಿಡದೆ ಮುಂದುವರಿಯುತ್ತ ಬಂದಿದೆ. ಇದರ ಪರಿಶೀಲನೆ ಭೂವಿಜ್ಞಾನದ ಒಂದು ಪ್ರಮುಖ ಆಸಕ್ತಿ. ಶಿಲೆಗಳೇ ಭೂಮಿಯ ಇತಿಹಾಸದ ಪುಟಗಳು, ಭೂವೈಜ್ಞಾನಿಕ ದಾಖಲೆಗಳು. ನಗ್ನೀಕರಣವೇ ಈ ದಾಖಲೆಯ ನಿರ್ಮಾಣದ ಮೊದಲನೆಯ ಹಂತ; ಸ್ಥಾನಾಂತರೀಕರಣ ಎರಡನೆಯ ಹಂತ; ಶಿಲಾನಿಕ್ಷೇಪ ಮೂರನೆಯ ಹಂತ. ಈ ಮೂರು ಹಂತಗಳ ಸಮಷ್ಟಿಗೆ ಶಿಲಾವಿಕಾರ (ವೆದರಿಂಗ್) ಎಂದು ಹೆಸರು. 

	ಶಿಲಾಕ್ಷಯದಲ್ಲಿ ಶಿಥಿಲೀಕರಣ ನಗ್ನೀಕರಣದ ಅತಿ ಪ್ರಮುಖ ಕ್ರಿಯೆ. ಸೂರ್ಯ ವಾಯು ಜಲ ಹಿಮಾದಿ ಪ್ರಾಕೃತಿಕ ನಿಯೋಗಿಗಳ ಹಾವಳಿಯಿಂದ ಭೂಭಾಗಗಳು ಸವೆಯುತ್ತವೆ ಎಂದು ಮೇಲೆ ಹೇಳಿದೆ. ಉಷ್ಣವಲಯ ಪ್ರದೇಶಗಳಲ್ಲಿ ಸೂರ್ಯನ ಕಾವು ಬಲು ಹೆಚ್ಚಾಗಿರುವುದರಿಂದ ಶಿಲೆಗಳ ಗಾತ್ರ ಹಗಲು ಹಿಗ್ಗುತ್ತದೆ. ಇರುಳು ಕುಗ್ಗುತ್ತದೆ. ಈ ಶೀತೋಷ್ಣ ಸ್ಥಿತಿಯ ವ್ಯತ್ಯಾಸಗಳಿಂದ ಕಲ್ಲುಗಳ ತ್ರಾಣ ಕಡಿಮೆ ಆಗುತ್ತದೆ. ಕಲ್ಲುಗಳಲ್ಲಿ ಬಿರುಕುಗಳು ಉಂಟಾಗುತ್ತವೆ. ಪದರಗಳೂ ಉಂಟಾಗಬಹುದು. ಕ್ರಮೇಣ ಇವು ಒಡೆದು ಚೂರುಚೂರಾಗುತ್ತವೆ. ಉನ್ನತವಾದ ಪರ್ವತಪ್ರದೇಶಗಳಲ್ಲಿ ಸದಾ ಹಿಮ ಬೀಳುತ್ತಿರುವುದು. ಆದ್ದರಿಂದ ಅಲ್ಲಿರುವ ಶಿಲೆಗಳ ರಂಧ್ರಗಳಲ್ಲಿಯೂ ಬಿರುಕುಗಳಲ್ಲಿಯೂ ಸೇರಿರುವ ನೀರು ಹೆಪ್ಪುಗಟ್ಟಿದಾಗ, ನೀರಿನ ಗಾತ್ರ ಹೆಚ್ಚಾಗುವುದರಿಂದ, ಶಿಲೆಗಳು ಶಿಥಿಲವಾಗುತ್ತವೆ. ಹೀಗೆ ಶಿಲೆಗಳ ಶಿಥಿಲೀಕರಣ ಮೊದಲಾಗುತ್ತದೆ. ಎತ್ತರವಾದ ಶಿಖರಗಳಿಂದ ದೊಡ್ಡ ದೊಡ್ಡ ಬಂಡೆಗಳು ಕೆಳಕ್ಕೆ ಉರುಳಿಕೊಂಡು ಬಂದು ಬೀಳುತ್ತವೆ. ಆಗ ಅವು ಒಡೆದು ಸಣ್ಣ ಬಂಡೆಗಳಾಗಿ ಕಾಲಕ್ರಮೇಣ ಪುಡಿಪುಡಿಯಾಗುವುವು. ಈ ಶಿಲೆಯ ಕಣಗಳನ್ನು ಗಾಳಿ ತೂರಿಕೊಂಡು ಹೋಗುತ್ತದೆ. ಮರಳುಗಾಡುಗಳಲ್ಲಿಯ ಮರಳುದಿಬ್ಬಗಳು ಗಾಳಿ ಒಯ್ದ ಮರಳಿನಿಂದ ನಿರ್ಮಿತವಾದ ನಿಕ್ಷೇಪಗಳು. ಗಾಳಿ ತನ್ನಲ್ಲಿರುವ ಕಣಗಳೊಡನೆ ಕೂಡಿ ಎದುರಿಗೆ ಇರುವ ಬಂಡೆಗಳ ಮೇಲೆ ವೇಗದಿಂದ ಅಪ್ಪಳಿಸಿದಾಗ ಆ ಬಂಡೆಯ ಮುಖ ಸವೆಯುವುದು. ಉದಾಹರಣೆಗೆ ಈಜಿಪ್ಟಿನ ಪಿರಮಿಡ್ಡುಗಳು ಗಾಳಿಯ ರಭಸದಿಂದ ಸವೆದಿವೆ. ನದಿಗಳೂ ತೊರೆಗಳೂ ತಮ್ಮ ಮೇಲ್ಭಾಗದಲ್ಲಿ ವಿಶೇಷವಾಗಿ ನೆಲವನ್ನು ತೇಯುತ್ತವೆ. ಹಿಮನದಿಗಳೂ ಹಾಗೆಯೇ ತಮ್ಮ ಕಣಿವೆಯ ತಳವನ್ನು ಸವೆಯಿಸುತ್ತವೆ. ಸಮುದ್ರತೀರದಲ್ಲಿ ಸದಾ ಅಲೆಗಳು ಬಂದು ಬಡಿಯುವುದರಿಂದ ಅಲ್ಲಿರುವ ಶಿಲೆಗಳು ಬಲುಬೇಗ ಸಡಿಲವಾಗಿ ಸವೆದುಹೋಗುತ್ತವೆ. ಸಮುದ್ರದ ಉಪ್ಪುನೀರಿನ ಹಾವಳಿಯಿಂದ ಗ್ರ್ಯಾನೈಟ್ ಮೊದಲಾದ ಗಟ್ಟಿಕಲ್ಲುಗಳೂ ಬೇಗ ತೇಯುವುವು. ಮಹಾಬಲಿಪುರದ ಬಳಿ ಇರುವ ಕಡಲತೀರದ ಪ್ರಾಚೀನ ಮಂದಿರ ಮತ್ತು ಅಲ್ಲಿರುವ ಸ್ಥೂಲಮೂರ್ತಿ ಸಮುದ್ರದ ವಿನಾಶ ಕಾರ್ಯಕ್ಕೆ ಉತ್ತಮ ನಿದರ್ಶನ. ಆ ಮೂರ್ತಿ ಕುಳಿಬಿದ್ದಿದೆ. ಇದೇ ರೀತಿ ಶ್ರವಣಬೆಳಗೊಳದ ಜಗತ್ಪ್ರಸಿದ್ಧ ಏಕಶಿಲಾ ಮೂರ್ತಿ ಶ್ರೀ ಗೋಮಟೇಶ್ವರನ ವಿಗ್ರಹ ಹತ್ತು ಶತಮಾನಗಳಿಂದ ಆವರಣರಹಿತವಾಗಿ ನಿಂತಿರುವುದರಿಂದ ಅದರ ಎಡತೋಳು ಮತ್ತು ಬೆನ್ನಿನ ಎಡಭಾಗ ಕುಳಿಬಿದ್ದಿವೆ. ತಲೆಯ ಮೇಲಿರುವ ಗುಂಗುರುಗಳಲ್ಲಿ ಲೋಮನಾಳಗಳಂತಿರುವ ಬಿರುಕುಗಳು ಮೂಡಿವೆ.

	ರಾಸಾಯನಿಕ ಶಿಲಾಕ್ಷಯದ ವರ್ತನೆ ಬೇರೆ ಬಗೆಯದು. ಶುದ್ಧ ನೀರಿಗೆ ಕಲ್ಲನ್ನು ತೇಯುವ ಸಾಮಥ್ರ್ಯವಿಲ್ಲ. ಆದರೆ ಶಿಲಾಕಣಗಳೊಡನೆ ಕೂಡಿದಾಗ ನೀರಿನೊಡನೆ ರಾಸಾಯನಿಕಗಳು ಬೆರೆತು ಅದಕ್ಕೆ ವಿಶೇಷ ಸಾಮಥ್ರ್ಯ ಬರುತ್ತದೆ. ಎಂದೇ ಇಂಥ ನೀರು ಹರಿಯುವಾಗ ಅದು ತನ್ನ ಹಾದಿಯಲ್ಲಿನ ಕಲ್ಲುಮಣ್ಣನ್ನು ಕೊರೆದು ಸಾಗುತ್ತದೆ. ನದಿಗಳ ಕಣಿವೆ ವಿಶಾಲವಾಗಿ ಆಳವಾಗಿ ಪರಿಣಮಿಸುವುದಕ್ಕೆ ಜಲದಲ್ಲಿ ಕೊಚ್ಚಿಕೊಂಡು ಬಂದಿರುವ ಶಿಲೆಯ ಕಣಗಳೇ ಕಾರಣ. ಕಾರ್ಬನ್ ಡೈ ಆಕ್ಸೈಡ್ ವಿಲೀನವಾಗಿರುವ ನೀರು ಸುಣ್ಣಕಲ್ಲಿನ ಪ್ರದೇಶಗಳನ್ನು ಶಿಲೆಯನ್ನು ಕರಗಿಸಿ ಕೊರೆದು ಬಿಡುತ್ತದೆ. ದೊಡ್ಡ ದೊಡ್ಡ ಗವಿಗಳೇ ಅಲ್ಲಿ ರೂಪಿತವಾಗುತ್ತವೆ. ಉಪ್ಪು ಕರಗಿರುವ ನೀರಿನ ಹಾವಳಿಯು ಹೇಳತೀರದು.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ